ಅಸ್ಸಾಯ್ ಯುದ್ಧ -
ದಖನ್ನಿನ ಚರಿತ್ರೆಯಲ್ಲಿ ಇಂಗ್ಲೀಷರು ಗಳಿಸಿದ ಪ್ರಸಿದ್ಧ ವಿಜಯಕ್ಕೆ ಸಂಬಂಧಿಸಿದ ಯುದ್ಧ. 1803ರ ಆಗಸ್ಟ್ 12ರಂದು ಔರಂಗಾಬಾದ್‍ಗೆ 45 ಮೈ. ದೂರವಿರುವ ಅಸ್ಸಾಯ್‍ನಲ್ಲಿ ವೆಲ್ಲೆಸ್ಲಿ ಮರಾಠರ ಸೈನ್ಯವನ್ನೆದುರಿಸಿ ಗೆದ್ದ. ಪೇಶ್ವೆ ಎರಡನೆಯ ಬಾಜಿರಾಯ ಇಂಗ್ಲಿಷರೊಡನೆ ಮಾಡಿಕೊಂಡ ಬೇಸಿನ್ ಒಪ್ಪಂದ ಮಹಾರಾಷ್ಟ್ರದ ಸ್ವಾತಂತ್ರ್ಯವನ್ನು ಹಾಳುಮಾಡಿತೆಂಬ ಕಾರಣದಿಂದ ಒಪ್ಪದ ಮರಾಠರು ದೌಲತ್‍ರಾವ್ ಸಿಂಧ್ಯೆ, ಭೌನ್‍ಸ್ಲೆಗಳ ನೇತೃತ್ವದಲ್ಲಿ ಯುದ್ಧಕ್ಕೆ ಸಿದ್ಧರಾದರು; ಗಾಯಕವಾಡ ತಟಸ್ಥನಾದ. ಹೋಳ್ಕರ್ ಸಹಾಯ ಮಾಡಲಿಲ್ಲ. ಮರಾಠರ ಸೈನ್ಯ 2,50,000 ಇದ್ದು ಅವರಲ್ಲಿ 40,000 ಮಂದಿ ಫ್ರೆಂಚ್‍ರಿಂದ ತರಬೇತಿ ಪಡೆದವರಾಗಿದ್ದರು. ಆದರೂ ಮರಾಠರಿಗೆ ಸೋಲಾದುದು ಶೋಚನೀಯ.				     
(ಎಚ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ